ಫಾಕ್ಸ್, ಚಾಲ್ರ್ಸ್ ಜೇಮ್ಸ್
1749-1806. ಬ್ರಿಟಿಷ್ ರಾಜಕಾರಣಿ. ಪ್ರಜಾಪ್ರಭುತ್ವ ಧುರೀಣ ಮತ್ತು ವಾಗ್ಮಿ. ಹಾಲೆಂಡಿನ ಮೊದಲ ಲಾರ್ಡ್‍ಹೆನ್ರಿ ಫಾಕ್ಸ್‍ನ ಮೂರನೆಯ ಮಗನಾಗಿ 1749 ಜನವರಿ 24 ರಂದು ಲಂಡನ್‍ನಲ್ಲಿ ಜನಿಸಿದ. ಈತನ ಬಾಲ್ಯ ಶಿಕ್ಷಣ ಈಟನ್‍ನಲ್ಲಿ ನಡೆಯಿತು. ತಂದೆಯೊಡನೆ ವಿದೇಶಗಳಿಗೆ ಆಗಾಗ ಭೇಟಿ ನೀಡುತ್ತಿದ್ದ. ತಾಯಿಕಡೆಯಿಂದ ಇಂಗ್ಲೆಂಡಿನ ಎರಡನೆಯ ಚಾಲ್ರ್ಸ್‍ನಿಗೂ ಫಾನ್ಸ್‍ನ ನಾಲ್ಕನೆಯ ಹೆನ್ರಿಗೂ ಸಂಬಂಧಿಕನಾಗಿದ್ದ. 1764ರಿಂದ ಆಕ್ಸ್‍ಫರ್ಡ್‍ನ ಕಾಲೇಜಿನಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರೆಸಿ ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ.

	ಫಾಕ್ಸ್ 1768ರಲ್ಲಿ ತಂದೆಯ ವರ್ಚಸ್ಸಿನಿಂದ ಸಂಸತ್ತಿನಲ್ಲಿ ಸ್ಥಾನಗಳಿಸುವ ಮೂಲಕ ಸಕ್ರಿಯ ರಾಜಕೀಯದಲ್ಲಿ ಪ್ರವೇಶಮಾಡಿದ. ಮುಂದೆ ಅವನಿಗೆ ವಿವಿಧ ಹುದ್ದೆಗಳು ದೊರೆತವು. ಅದರೆ ಅವನ ರಾಜಶಾಹಿ ವಿರುದ್ಧವಾದ ದೃಢ ನಿಲುವಿನಿಂದಾಗಿ ಕೆಲವೊಮ್ಮೆ ಹುದ್ದೆಗಳನ್ನು ತ್ಯಜಿಸಬೇಕಾಗಿ ಬಂತು. ಫಾಕ್ಸ್ ರಾಜ ಕುಟುಂಬದ ವಿವಾಹ ಕಾಯಿದೆಗೆ ವಿರೋಧವಾದುದಕ್ಕಾಗಿ 1774ರಲ್ಲಿ ದೊರೆ ಈತನನ್ನು ಟ್ರಷರಿಯ ಲಾರ್ಡ್ ಹುದ್ದೆಯಿಂದ ತೆಗೆದು ಹಾಕಿದ.

	ಫಾಕ್ಸ್‍ನದು ವೈವಿಧ್ಯಪೂರ್ಣ ವ್ಯಕ್ತಿತ್ವ. ವೈಯಕ್ತಿಕ ಆಮಿಷಗಳಿಗೆ ಬಲಿಬೀಳದೆ ತತ್ತ್ವಗಳಿಗಾಗಿ ಹೋರಾಡುವುದು ಅವನ ಜಾಯಮಾನ. ನಿಷ್ಕ್ರೀಯ ಜೀವನವೂ ಅವನಿಗೆ ಒಗ್ಗದು. ಆಡಂಬರದ ಜೀವನ, ಜೂಜಾಟ ಮತ್ತು ಪಂದ್ಯಗಳ ಹವ್ಯಾಸವಿರಿಸಿಕೊಂಡಿದ್ದ ಫಾಕ್ಸ್ ಕೊನೆಕೊನೆಗೆ ಜೂಜಾಟ ಮತ್ತು ಪಂದ್ಯಗಳನ್ನು ತ್ಯಜಿಸಿದ. ಅಧಿಕಾರ ಕಳೆದುಕೊಂಡ ಸ್ವಲ್ಪ ಕಾಲದಲ್ಲೇ ವಿಗ್ ಪಕ್ಷ ಸೇರಿ ಕಾಮನ್ಸ್ ಸಭೆಯಲ್ಲಿ ಅದರ ನಾಯಕನಾದ. ಅಮೆರಿಕ ವಸಾಹತು ಯುದ್ಧದ ಸಂಬಂಧವಾಗಿ ಬ್ರಿಟಿಷ್ ಸರ್ಕಾರ ತಳೆದ ಧೋರಣೆಯನ್ನು ಪ್ರಬಲವಾಗಿ ವಿರೋಧಿಸಿದ. 1782ರಲ್ಲಿ ನಾರ್ಥ್‍ನ ಮಂತ್ರಿಮಂಡಲ ಬಿದ್ದಾಗ ವಿಗ್ ಪಕ್ಷದ ಮಂತ್ರಿಮಂಡಲ ರಚಿತವಾಯಿತು. ಆಗ ಫಾಕ್ಸ್ ಬ್ರಿಟಿಷ್ ಇತಿಹಾಸದಲ್ಲಿ ಪ್ರಥಮ ವಿದೇಶಾಂಗ ಕಾರ್ಯದರ್ಶಿಯಾದ. ಪ್ರಧಾನ ಮಂತ್ರಿ ಲಾರ್ಡ್‍ರ್ಯಾಕಿಂಗ್ ಹ್ಯಾಮ್ 1782 ಜುಲೈ 1 ರಂದು ನಿಧನನಾದಾಗ ದೊರೆ ಶೆಲ್‍ಬರ್ನ್‍ನನ್ನು ಪ್ರಧಾನಿಯಾಗಿ ಆರಿಸಿದ. ಪ್ರಧಾನಿಯನ್ನು ದೊರೆ ಹೆಸರಿಸುವುದು ಸರಿಯಲ್ಲವೆಂದು ಹೊರಗೆ ಇರುವ ಅಧಿಕಾರವ್ಯಾಪ್ತಿಯನ್ನು ಫಾಕ್ಸ್ ಪ್ರಶ್ನಿಸಿದ. ಹಾಗೂ ಶೆಲ್‍ಬರ್ನ್ ಪ್ರಧಾನಿಯಾದುದನ್ನು ಪ್ರತಿಭಟಿಸಿ ಫಾಕ್ಸ್ ತನ್ನ ಕೆಲವು ಸ್ನೇಹಿತರೊಂದಿಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. ಆದರೆ ಫಾಕ್ಸ್‍ನ ಈ ನಿಲುವು ಸಂವಿಧಾನ ಬಾಹಿರವಾಗಿತ್ತೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಅವನ ರಾಜಕೀಯ ಜೀವನದ ದುರದೃಷ್ಟಕರ ಪ್ರಸಂಗವೆಂದು ಕೆಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

	ಸದಾ ಕ್ರಿಯಾಶೀಲನಾಗಿದ್ದ ಫಾಕ್ಸ್ ತನ್ನ ವಿರೋಧಿ ನಾರ್ಥ್‍ನೊಂದಿಗೆ 1783ರಲ್ಲಿ ಮೈತ್ರಿ ಬೆಳೆಸಿದ. ಈ ಮೈತ್ರಿ ಕೂಟ ಹೊಸ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಯಿತು. ತೀವ್ರ ರಾಜಕೀಯ ಬಿಕ್ಕಟ್ಟಿನ ಬಳಿಕ ಇವರ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. 
ಪೋರ್ಟ್‍ಲೆಂಡ್‍ನ ಡ್ಯೂಕ್ ಪ್ರಧಾನಿಯಾದ. ಫಾಕ್ಸ್ ಮತ್ತು ನಾರ್ಥ್ ಇಬ್ಬರೂ ಸ್ಟೇಟ್‍ನ ಕಾರ್ಯದರ್ಶಿಯಾದರು. ಇಂಡಿಯಾ ಬಿಲ್ ಮಸೂದೆಯನ್ನು ಸರ್ಕಾರ ಮಂಡಿಸಿದಾಗ ಅದು ಲಾಡ್ರ್ಸ್ ಸಭೆಯಲ್ಲಿ ಬಿದ್ದು ಹೋಯಿತು. ಆಗ ಸರ್ಕಾರ ರಾಜೀನಾಮೆ ನೀಡಬೇಕಾಗಿ ಬಂದು ವಿಲಿಯಮ್ ಪಿಟ್ ಸರ್ಕಾರ ರಚಿಸಿದ. ಈ ರಾಜಕೀಯ ಬಿಕ್ಕಟ್ಟಿನಲ್ಲಿ ಫಾಕ್ಸ್ ಮಂತ್ರಿಗಳನ್ನು ನೇಮಿಸುವಲ್ಲಿ ರಾಜನಿಗಿರುವ ಅಧಿಕಾರವನ್ನು ಪ್ರಶ್ನಿಸಿ ತೀವ್ರ ವಿರೋಧಕ್ಕೊಳಗಾಗಿ ಸಾಕಷ್ಟು ಅಪ್ರಿಯನಾದ. ಪಾರ್ಲಿಮೆಂಟ್ ವಿಸರ್ಜನೆಗೊಂಡು (1784, ಮಾರ್ಚ್) ಮರುಚುನಾವಣೆಯಾದಾಗ ವೆಸ್ಟ್‍ಮಿನಿಸ್ಟರ್‍ನಿಂದ ಫಾಕ್ಸ್ ಸಚಿವಸಂಪುಟದ ಅಭ್ಯರ್ಥಿಯನ್ನು ಸೋಲಿಸಿ ಮತ್ತೆ ಚುನಾಯಿತನಾದ. ಆದರೆ ಅವನ ಪಕ್ಷ ಕಾಮನ್ಸ್ ಸಭೆಯಲ್ಲಿ ಅಲ್ಪ ಸಂಖ್ಯಾತವಾಯಿತು.

	ರಾಜ ಪ್ರತಿನಿಧಿಯ ಹಕ್ಕಿನ ಸಂಬಂಧದಲ್ಲಿ ಮತ್ತು ಫ್ರೆಂಚ್ ಕ್ರಾಂತಿ ಹಾಗೂ 1793ರಲ್ಲಿ ಫ್ರಾನ್ಸ್‍ನೊಡನೆ ನಡೆದ ಯುದ್ಧದ ಸಂದರ್ಭಗಳಲ್ಲಿ ಫಾಕ್ಸ್ ಸರ್ಕಾರಕ್ಕೆ ಭಿನ್ನವಾದ ನಿಲುವು ತಳೆದ. ಆನರ ಸಾರ್ವಭೌಮತೆಯ ತತ್ತ್ವವನ್ನು ಸಾರ್ವಜನಿಕ ಭಾಷಣದಲ್ಲಿ ಪುನರ್ ಪ್ರತಿಪಾದಿಸಿದ್ದಕ್ಕಾಗಿ 1798ರಲ್ಲಿ ಫಾಕ್ಸ್‍ನನ್ನು ಪ್ರಿವಿ ಕೌನ್ಸಿಲ್‍ನಿಂದ ತೆಗೆದುಹಾಕಲಾಯಿತು. ಎಂಟು ವರ್ಷಗಳ ಅನಂತರ ಪುನಃ ರಾಜ ಅವನ ಸದಸ್ಯತ್ವವನ್ನು ಮಾನ್ಯಮಾಡಿದ. ಫಾಕ್ಸ್ ಪ್ರಜಾತಂತ್ರಾತ್ಮಕ ಮೌಲ್ಯಗಳ ತೀವ್ರ ಪ್ರತಿಪಾದಕನಾಗಿ ಸರ್ಕಾರದ ಮತ್ತು ರಾಜನ ವಿರೋಧದ ನೆರಳಲ್ಲೇ ನಡೆದ 1806ರಲ್ಲಿ ಮೂರನೆಯ ಜಾರ್ಜ್‍ನ ವಿರೋಧ ಮರೆಯಾಗಿ ಫಾಕ್ಸ್ ವಿದೇಶಾಂಗ ಕಾರ್ಯದರ್ಶಿಯಾದ. ಆದರೆ ಅವನ ಆರೋಗ್ಯ ಕೆಟ್ಟು 1806 ಸೆಪ್ಪಂಬರ್ 13ರಂದು ಮೃತನಾದ. ಅವನನ್ನು ವೆಸ್ಟ್ ಮಿನಿಸ್ಟರ್ ಅಬ್ಬೆಯ ಪಿಟ್‍ನ ಸಮಾಧಿ ಪಕ್ಕದಲ್ಲೆ ಸಮಾಧಿ ಮಾಡಲಾಯಿತು. ಫಾಕ್ಸ್ 1795ರಲ್ಲಿ ಗುಟ್ಟಾಗಿ ಎಲಿಜಬೆತ್ ಅರ್ಮಸ್ಟೆಡ್‍ಳೊಂದಿಗೆ ವಿವಾಹವಾಗಿದ್ದರೂ 1802ರಲ್ಲಿ ಅದನ್ನು ಬಹಿರಂಗಗೊಳಿಸಿದ ಇವನ ಪತ್ನಿ 1842ರ ತನಕವೂ ಜೀವಿಸಿದ್ದಳು.

	ಫಾಕ್ಸ್ ಬ್ರಿಟಿನ್‍ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲು ಅದು ಹದಗೊಳ್ಳುತ್ತಿದ್ದ ಕಾಲದಲ್ಲಿ ಅದಕ್ಕೆ ತನ್ನ ಅಮೂಲ್ಯ ಕಾಣಿಕೆ ನೀಡಿದ ರಾಜನ ನಿರಂಕುಶ ಅಧಿಕಾರ ಚಲಾವಣೆ ವಸಾಹತು ಶೋಷಣೆ ಗುಲಾಮ ಪದ್ಧತಿ ಮತ್ತು ಶ್ರೀಸಾಮಾನ್ಯರ ಹಕ್ಕುಗಳನ್ನು ಮೊಟುಕುಗೊಳಿಸುವುದರ ವಿರುದ್ಧ ಜೀವನ ಪರ್ಯಂತ ಹೋರಾಟ ನಡೆಸಿದ ಅಸಾಧಾರಣ ಪ್ರಜಾಪ್ರಭುತ್ವವಾದಿ ತಾನು ಅಪೇಕ್ಷಿಸಿದ್ದರೆ ಪ್ರಧಾನಿಯಾಗಬಹುದಾಗಿದ್ದ ಅವಕಾಶವನ್ನು ತ್ಯಾಗಮಾಡಿ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿಪಾದನೆಗೆ ತನ್ನ ಸೇವೆಯನ್ನು ಮುಡಿಪಿಟ್ಟು ಬ್ರಿಟಿಷ್ ಸಂಸದೀಯ ವ್ಯವಸ್ಥೆಯ ಮೇಲೆ ಚಿರಂತನ ಪ್ರಭಾವ ಬೀರಿದಂಥ ತತ್ತ್ವಗಳಾಗಿ ಹೋರಾಡಿದ ಧುರೀಣ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ